ಭಾಷಣಕ್ಕೆ ಅಡ್ಡಿ!
ಇನ್ನು ಜಿ. ಬಿ. ವಿನಯ್ ಕುಮಾರ್ ಅವರು ಮಾತನಾಡುವಾಗ ಮಲೇಬೆನ್ನೂರು ಪುರಸಭೆ ಅಧಿಕಾರಿಗಳು ಮಾತನಾಡಲು ಅಡ್ಡಿಪಡಿಸಿದ ಪ್ರಸಂಗವೂ ನಡೆಯಿತು. ಮೈಕ್ ಆಫ್ ಮಾಡಿ ಎಂದು ಪದೇ ಪದೇ ಹೇಳಿದರು. ವಿನಯ್ ಕುಮಾರ್ ಅವರು ಯಾಕೆ ಒತ್ತಡ ಹಾಕುತ್ತೀರಾ. ಜನರ ಸಮಸ್ಯೆಗಳಿಗೆ ಸ್ಪಂದಿಸಲು ಬಂದಿದ್ದೇವೆ ಎಂದರು. ಆದ್ರೂ ಪುರಸಭೆಯ ಸಿಬ್ಬಂದಿ ಮೈಕ್ ನಲ್ಲಿ ಮಾತನಾಡಬೇಡಿ ನಿಲ್ಲಿಸಿ ಎಂದು ಪದೇ ಪದೇ ಕಿರಿಕಿರಿಯನ್ನುಂಟು ಮಾಡಿದರು. ಯಾರ ಒತ್ತಡಕ್ಕೆ ಮಣಿದು ಈ ರೀತಿ ಮಾಡುತ್ತಿದ್ದೀರಾ ಎಂದು ವಿನಯ್ ಕುಮಾರ್ ಪ್ರಶ್ನಿಸಿದರು.
ಜನಪ್ರತಿನಿಧಿಗಳು ಹಾಗೂ ಸಮಾಜದ ನಡುವೆ ದೊಡ್ಡ ಕಂದಕ ಉಂಟಾಗಿದೆ. ಆದ್ದರಿಂದಲೇ ಮತ ನೀಡಿದ ಜನರಿಗೆ ಯಾವುದೇ ಅಭಿವೃದ್ಧಿ ಹಾಗೂ ಸಮಸ್ಯೆಗಳಿಗೆ ಪರಿಹಾರ ಸಿಗುತ್ತಿಲ್ಲ ಎಂದು ಸ್ವಾಭಿಮಾನಿ ಬಳಗದ ರಾಜ್ಯಾಧ್ಯಕ್ಷ ಜಿ. ಬಿ. ವಿನಯ್ ಕುಮಾರ್ ವಿಷಾದ ವ್ಯಕ್ತಪಡಿಸಿದರು.

ಹೆದ್ದಾರಿಯ ಅಗಲೀಕರಣಕ್ಕೆ ಕಾಳಜಿ ತೋರಿಸಿಲ್ಲ ಎಂದು ಆರೋಪಿಸಿದರು.
ಸುಮಾರು ಒಂದೂವರೆ ವರ್ಷದಿಂದ ನಾನೂ ಓಡಾಡುತ್ತಿದ್ದೇನೆ. ಹರಿಹರದಿಂದ ಹೊನ್ನಾಳಿಗೆ ಹೋಗುವ ರಸ್ತೆಯಲ್ಲಿ ಅಪಘಾತಗಳಾಗಿವೆ. ಈ ಭಾಗದ ಜನರಿಗೆ ಅನ್ಯಾಯವಾಗುತ್ತಲೇ ಇದೆ. ವ್ಯಾಪಾರಿಗಳು, ಆಟೋಡ್ರೈವರ್, ಚಾಲಕರು, ಜನರು ತಮ್ಮ ಪಾಡಿಗೆ ಇದ್ದಾರೆ. ಹಾಗಾಗಿ, ಜನಪ್ರತಿನಿಧಿಗಳು ಇತ್ತ ಗಮನ ಹರಿಸುತ್ತಿಲ್ಲ. ಸಮಸ್ಯೆಗಳಿಗೆ ಸ್ಪಂದಿಸಬೇಕಾದ, ಪರಿಹರಿಸಬೇಕಾದವೆ ಸುಮ್ಮನಿದ್ದರೆ ಹೆದ್ದಾರಿ ಅಗಲೀಕರಣ ಆಗುವುದು ಯಾವಾಗ ಎಂದು ಪ್ರಶ್ನಿಸಿದರು.
ನೀವು ಜಿಲ್ಲಾ ಉಸ್ತುವಾರಿ ಸಚಿವರನ್ನು ಭೇಟಿ ಮಾಡಿ ಸಹಾಯ ಮಾಡಿ ಎಂದು ಕೇಳಲು ಆಗುತ್ತದೆಯೇ. ಸಮಸ್ಯೆಗಳಿದ್ದಾಗ ಸುಮ್ಮನೆ ಇರಬೇಕಾ, ಕೈಕಟ್ಟಿ ಕೂರಬೇಕಾ. ಜನರ ಕಷ್ಟಗಳಿಗೆ ಸ್ಪಂದಿಸುವ, ಸಮಸ್ಯೆಗಳ ಬಗ್ಗೆ ಮಾಹಿತಿ ಕಲೆ ಹಾಕಿ ಸಂಬಂಧಪಟ್ಟವರಿಗೆ ತಲುಪಿಸುವ ಕೆಲಸ ಮಾಡುತ್ತೇವೆ ಎಂದು ಹೇಳಿದರು.
ಲೋಕಸಭೆ ಚುನಾವಣೆಗೆ ಮುನ್ನ ಮತ ಕೇಳಲು ಬಂದಾಗ ರಾಜ್ಯ ಹೆದ್ದಾರಿ ಅಗಲೀಕರಣ ಮಾಡುತ್ತೇವೆ. ಭೈರನಪಾದ ಏತ ನೀರಾವರಿ ಯೋಜನೆ ಜಾರಿಗೊಳಿಸುತ್ತೇವೆ ಎಂಬ ಭರವಸೆ ನೀಡಿದ್ದರು. ಶಾಸಕರು, ಸಚಿವರು, ಸಂಸದರು ಮನಸ್ಸು ಮಾಡಿದರೆ ಹೆದ್ದಾರಿ ಮೂರು ತಿಂಗಳಿನಲ್ಲಿ ಮಾಡಬಹುದು. ಇದಕ್ಕೆ ಇಚ್ಛಾಶಕ್ತಿ ಬೇಕು. 2011ರಲ್ಲಿ ಭೈರನಪಾದ ಯೋಜನೆಗೆ ಅನುಮೋದನೆ ಸಿಕ್ಕಿದ್ದರೂ ಇದುವರೆಗೆ ಒಂದು ಹನಿ ನೀರು ಬಂದಿಲ್ಲ. ನಾಲ್ಕು ಸಾವಿರ ಹೆಕ್ಟೇರ್ ಪ್ರದೇಶಗಳಿಗೆ ನೀರುಣಿಸುವ ಯೋಜನೆ ಇನ್ನೂ ಜಾರಿಗೆ ಬಂದಿಲ್ಲ. ರೈತರ ಬೇಡಿಕೆಗೆ ಮನ್ನಣೆ ಸಿಕ್ಕಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ಬಳಗದ ರಾಜ್ಯ ಉಪಾಧ್ಯಕ್ಷ ಶಿವಕುಮಾರ್ ಶೆಟ್ಟರ್, ರಾಜು ಮೌರ್ಯ, ರಾಜು ಕಣಗಣ್ಣನವರ್, ರಾಜ್ಯ ಸಂಘಟನಾ ಕಾರ್ಯದರ್ಶಿ ವಿರೂಪಾಕ್ಷಪ್ಪ ಪಂಡಿತ್, ರಾಜ್ಯ ಸಂಚಾಲಕಾರದ ಮೊಹಮ್ಮದ್ ಸಾಧಿಕ್, ಎಸ್. ಚಂದ್ರಶೇಖರ್, ಅಜ್ಜಯ್ಯ ಮತ್ತಿತರರು ಹಾಜರಿದ್ದರು.
- ವಿರೂಪಾಕ್ಷಪ್ಪ ಪಂಡಿತ್